ಬಸವನಗುಡಿಯಲ್ಲಿ 350 ಯೋಗಾಭ್ಯಾಸಿಗಳಿಂದ ಮಳೆಯೊಳಗೂ ನಡೆಯಿತು 4 ಕಿಮೀ ವಾಕಥಾನ್
ಬೆಂಗಳೂರು, ಜೂನ್ 13: ಅಂತಾರಾಷ್ಟ್ರೀಯ ಯೋಗ ದಿನದ (ಜೂನ್ 21) ಅಂಗವಾಗಿ ರಾಷ್ಟ್ರೋತ್ಥಾನ ಯೋಗಕೇಂದ್ರ – ಕೆಂಪೇಗೌಡನಗರ, ಸುಂಕೇನಹಳ್ಳಿ ಹಾಗೂ ಗಿರಿನಗರದವರು ಜಂಟಿಯಾಗಿ ಆಯೋಜಿಸಿದ್ದ ವಾಕಥಾನ್ಗೆ ವಿಭು ಅಕಾಡೆಮಿಯ ಮುಖ್ಯಸ್ಥರಾದ ಡಾ. ಆರತಿ ವಿ ಬಿ ಹಾಗೂ ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಚಾಲನೆ ನೀಡಿದರು.
ಡಾ. ಆರತಿಯವರ ಬಿಸಿಲು-ಮಳೆಗಳಿಗೆ ಒಡ್ಡಿಕೊಳ್ಳುವ ಸ್ಪೂರ್ತಿಯ ಮಾತುಗಳನ್ನು ಧರಿಸಿ, 350ಕ್ಕೂ ಹೆಚ್ಚಿನ ಯೋಗಾಭ್ಯಾಸಿಗಳು ಈ ಸಂಜೆಯ ಕಡುಕಪ್ಪಾದ ಮೋಡಗಳ ಕೆಳಗೇ ಕೇಶವಶಿಲ್ಪದಿಂದ ಯೋಗನಡಿಗೆಯನ್ನು ಪ್ರಾರಂಭಿಸಿ; ಬಸವನಗುಡಿ ರಸ್ತೆ, ರಂಗರಾವ್ ರಸ್ತೆಗಳಲ್ಲಿ ಹನಿಹನಿ ಮಳೆಯ ಸಿಂಚನವನ್ನು ಆಸ್ವಾದಿಸುತ್ತ; ಗಾಂಧೀಬಜಾರ್, ಡಿವಿಜಿ ರಸ್ತೆ, ಸುಂಕೇನಹಳ್ಳಿ, ಬಸವನಗುಡಿ ರಸ್ತೆಯಲ್ಲಿ ದೊಡ್ಡ ಮಳೆಗೆ ತೊಯ್ದು; ಕೇಶವಶಿಲ್ಪವನ್ನು ಪುನಃ ಪ್ರವೇಶಿಸುವುದರೊಂದಿಗೆ ಸುಮಾರು 4 ಕಿಮೀ ವಾಕಥಾನನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.
